ಫೇಸ್ಬುಕ್ Hacked Account V/s Fake Account
ಇತ್ತೀಚಿನ ದಿನಗಳಲ್ಲಿ ಹಲವಾರು ಮಂದಿ ಈ ಮೇಲಿನ ಎರಡು ವಿಚಾರಗಳಲ್ಲಿ ಗೋಜಿಗೆ ಒಳಗಾಗಿರುವ ವಿಚಾರ ಹೊಸದೇನಲ್ಲ.
ಮೊದಲಿಗೆ ಅವುಗಳೆರಡರ ವ್ಯತ್ಯಾಸವನ್ನು ವಿವರಿಸುತ್ತೇನೆ. ತದನಂತರ ಅವುಗಳಿಗೆ ಸಂಬಂಧಿಸಿದಂತೆ ಸೂಕ್ತ ಪರಿಹಾರವನ್ನು ಸೂಚಿಸುತ್ತೇನೆ. ಕ್ರಸ್ಟ್ ಸಂಸ್ಥೆಯ ದಶಮಾನೋತ್ಸವ ವರ್ಷಾಚರಣೆಯ ಸಂದರ್ಭದಲ್ಲಿ ಈ ಮಾಹಿತಿಯನ್ನು ಸಂಪೂರ್ಣ ಉಚಿತವಾಗಿ ಒದಗಿಸುತ್ತಿದ್ದೇನೆ. ಇದು ನಿಮಗೆ ಅಥವಾ ನಿಮ್ಮ ಮಿತ್ರರಿಗೆ ಸಹಾಯವಾಗಬಹುದು. ದಯವಿಟ್ಟು ಶೇರ್ ಮಾಡಿ.
Hacked Facebook Account
ಫೇಸ್ಬುಕ್ ಖಾತೆ ಹ್ಯಾಕ್ ಆಗುವುದು ಎಂದರೆ, ನೀವು ಈಗ ನಿರ್ವಹಿಸುತ್ತಿರುವ ವೈಯಕ್ತಿಕ ಫೇಸ್ಬುಕ್ ಖಾತೆ ಅಥವಾ ಫೇಸ್ಬುಕ್ ಪುಟವನ್ನು ನಿಮ್ಮ ಅನುಮತಿ ಇಲ್ಲದೆ ಅನ್ಯಮಾರ್ಗಗಳ ಮೂಲಕ ಪ್ರವೇಶಿಸಿ ಅದರಲ್ಲಿ ಮಾರ್ಪಾಡು ಮಾಡಿ, ನಿಮ್ಮ ಘನತೆ, ವರ್ಚಸ್ಸಿಗೆ ಧಕ್ಕೆಯಾಗುವಂತಹ ಚಟುವಟಿಕೆಗಳನ್ನು ಮಾಡುವುದು. ಫೇಸ್ಬುಕ್ ಖಾತೆ/ಪುಟವನ್ನು ಹ್ಯಾಕ್ ಮಾಡಿದಾಗ ಹೆಚ್ಚಿನ ಸಂದರ್ಭಗಳಲ್ಲಿ ಅಂತಹ ಖಾತೆ/ಪುಟದಲ್ಲಿ ನಿಮ್ಮ ನಿಯಂತ್ರಣ ದುಷ್ಕರ್ಮಿಯ ಪಾಲಾಗುತ್ತದೆ.
ಹ್ಯಾಕ್ ಆಗಲು ಸಾಮಾನ್ಯವಾಗಿ ಇರುವ ಕಾರಣಗಳೆಂದರೆ,
- ಅತೀ ಸುಲಭವಾಗಿ ಬಳಸಬಹುದಾದ ಪಾಸ್ವರ್ಡ್ ಉಪಯೋಗಿಸುವುದು
- ಅಸುರಕ್ಷಿತ ಲಿಂಕ್ ಕ್ಲಿಕ್ /ಅಪ್ಲಿಕೇಶನ್ ಬಳಕೆ ಮಾಡುವುದು
- 2 Factor Authentication ಬಳಸದೇ ಇರುವುದು
- ನಿಮಗೆ ತುಂಬಾ ಆತ್ಮೀಯರಲ್ಲದ ಹಾಗೂ ಇತ್ತೀಚೆಗಷ್ಟೇ ಪರಿಚಿತರಾದ ವ್ಯಕ್ತಿಗಳು ನಿಮ್ಮ ಖಾತೆಯಲ್ಲಿ ಯಾವುದೇ ಕೆಲವು ಸೆಟ್ಟಿಂಗ್ ಗಳನ್ನು ಬದಲಾವಣೆ ಮಾಡಿಸಲು ಹೇಳಿದ್ದನ್ನು ನೀವು ಅನುಸರಿಸುವುದು.
- ಅಸುರಕ್ಷಿತ ಸ್ಥಳಗಳಲ್ಲಿ (ಸೈಬರ್ ಕೆಫೆ/ ಕೆಲಸದ ಸ್ಥಳಗಳಲ್ಲಿ) ಫೇಸ್ಬುಕ್ ಬಳಸಿ ಲಾಗೌಟ್ ಆಗದೇ ಇರುವುದು ಅಥವಾ ಅಂತಹ ಸ್ಥಳಗಳಲ್ಲಿ ಪಾಸ್ವರ್ಡ್ ಬ್ರೋಸರ್ ನಲ್ಲಿ ಸೇವ್ ಮಾಡಿ ಇಡುವುದು.
- ನೀವು ಸುಪ್ರಸಿದ್ಧ ವ್ಯಕ್ತಿ ಅಥವಾ ಅತ್ಯಧಿಕ ಫಾಲೋವರ್ ಗಳನ್ನು ಹೊಂದಿರುವ ಫೇಸ್ಬುಕ್ ಪುಟವನ್ನು ಹೊಂದಿದ್ದಲ್ಲಿ ಹ್ಯಾಕಿಂಗ್ ತಂತ್ರಜ್ಞಾನದ ಮೂಲಕ.
Fake Facebook Account
ಫೇಕ್ ಅಕೌಂಟ್ ನಲ್ಲಿ ಮೂರು ವಿಧಗಳಿವೆ.
# ಮೊದಲನೆಯದು
ನಿಮ್ಮ ಹೆಸರಿನಲ್ಲಿ ಫೇಕ್ ಅಕೌಂಟ್ (ನಕಲಿ ಖಾತೆ) ಸೃಷ್ಟಿಸುವುದು ಎಂದರೆ, ನಿಮ್ಮ ಮೂಲ ಖಾತೆಯಲ್ಲಿ ಇರುವಂತೆಯೇ ಪ್ರೊಫೈಲ್ ಫೊಟೋ, ಹೆಸರು, ಇತರೇ ಮಾಹಿತಿಯನ್ನು ಯಥಾವತ್ತಾಗಿ ಬಳಸಿ ನಕಲಿ ಖಾತೆಯನ್ನು ಸೃಜಿಸಿ, ಈಗಾಗಲೇ ನಿಮ್ಮ ಮಿತ್ರರಿಗೆ (Friends List) ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಅವರನ್ನು (ನಿಮ್ಮ ಮಿತ್ರರನ್ನು) ಮೋಸಗೊಳಿಸುವುದು.
ಸಾಮಾನ್ಯವಾಗಿ ನಿಮ್ಮ ಮಿತ್ರರು ಇದರಿಂದ ವಂಚನೆಗೊಳಗಾಗುವ ಸಂಭವನೀಯತೆ ಹೆಚ್ಚು. ನಿಮ್ಮ ಘನತೆ/ವರ್ಚಸ್ಸು/ಸಂಬಂಧಗಳ ದುರ್ಬಳಕೆ ಮಾಡಿ ಫೋನ್ ಪೇ/ಗೂಗಲ್ ಪೇ ಮೂಲಕ ಹಣ ಲಪಟಾಯಿಸುವ ದಂಧೆಕೋರತನವನ್ನು ಇಲ್ಲಿ ಗಮನಿಸಬಹುದು.
# ಎರಡನೇ ವಿಧದ ಫೇಕ್ ಅಕೌಂಟ್
ಯಾವುದೋ ಅಪರಿಚಿತರ ಹೆಸರಿನಲ್ಲಿ ಪ್ರೊಫೈಲ್ ಸೃಜಿಸಿ, ನಿಮಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಅವರು ನೈಜ ವ್ಯಕ್ತಿಯಂತೆ ನಂಬಿಸಿ, ದುರ್ಬಳಕೆ/ವಂಚನೆ ಮಾಡುವ ಉದ್ದೇಶ ಹೊಂದಿರುವುದು. ಸಾಮಾನ್ಯವಾಗಿ ಸುಂದರವಾದ ಹುಡುಗಿಯರ ಭಾವಚಿತ್ರ ಬಳಸಿ ಪ್ರೊಫೈಲ್ ಸೃಜಿಸಿ, ಯುವಕರನ್ನು, ಪುರುಷರನ್ನು ಯಾಮಾರಿಸುವ ಹಾಗೆಯೇ ತದ್ವಿರುದ್ಧವಾಗಿ ಕೂಡ ವಂಚನೆ ಮಾಡುವ ಹಲವಾರು ಪ್ರಕರಣಗಳು ತುಂಬಾ ಹೊಸತೇನಲ್ಲ.
# ಮೂರನೇ ವಿಧದ ಫೇಕ್ ಅಕೌಂಟ್
ಯಾವುದೋ ಅಪರಿಚಿತ ವ್ಯಕ್ತಿಯ ಹೆಸರಿನಲ್ಲಿ ಅಪರಿಚಿತ ಹಾಗೂ ತೀರಾ ನೈಜವೆನಿಸುವ ಭಾವಚಿತ್ರವನ್ನು ಬಳಸಿ ಪ್ರೊಫೈಲ್ ಸೃಜಿಸಿ, ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವುದು. ಇಂತಹ ಖಾತೆ ಹೊಂದಿರುವ ವ್ಯಕ್ತಿಯು ನಿಮ್ಮೊಂದಿಗೆ ಚಾಟಿಂಗ್ ಗೆ ಬರಲಾರರು. ಯಾಕೆಂದರೆ ಅವರ ಉದ್ದೇಶ ವಂಚನೆ ಆಗಿರುವುದಿಲ್ಲ!
ಸಾಮಾನ್ಯವಾಗಿ ಈ ಮೂರನೇ ವಿಧದ ಫೇಕ್ ಅಕೌಂಟ್ ಫೇಸ್ಬುಕ್ ನಲ್ಲಿ ಹೆಚ್ಚು ಪ್ರಚಾರ/ ವ್ಯವಹಾರ ಪ್ರೊಮೋಶನ್ ಮಾಡುವ ಉದ್ದೇಶದಿಂದ ಮಾಡಲಾಗಿರುತ್ತದೆ.
ಇಂತಹ ವ್ಯಕ್ತಿಗಳು, ಫೇಸ್ಬುಕ್ ಲೈಕ್ ಗೆ ಆಮಂತ್ರಿಸುವ, ರೆಕಮಂಡೇಶನ್ ಮಾಡುವ ಮೂಲಕ ತಾನು ಕೆಲಸ ನಿರ್ವಹಿಸುವ ಸಂಸ್ಥೆಯನ್ನು ಹೆಚ್ಚು ಪ್ರಚಾರ ಮಾಡುವ ಉದ್ದೇಶದಿಂದ ಕಮೆಂಟ್ ಹಾಕುವ, ಶೇರ್ ಮಾಡುವ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಹೆಚ್ಚಾಗಿ ರಾಜಕೀಯದ ವಿಷಯಗಳಲ್ಲಿ ನಾವು ಇದನ್ನು ಗಮನಿಸಬಹುದು.
—————-
ಪರಿಹಾರಗಳು
# ಹ್ಯಾಕ್ ಆಗಿರುವ ಖಾತೆ/ಪೇಜ್
ಸಾಮಾನ್ಯವಾಗಿ ಖಾತೆ/ಪೇಜ್ ಹ್ಯಾಕ್ ಆದ ತಕ್ಷಣವೇ ಹ್ಯಾಕ್ ಮಾಡಿರುವ ವ್ಯಕ್ತಿಯು ನಿಮ್ಮ ಖಾತೆ/ಪೇಜ್ ನ ಪಾಸ್ವರ್ಡ್ (ನಿಮ್ಮ ನಿಯಂತ್ರಣ) ಅನ್ನು ಬದಲಾವಣೆ ಮಾಡುತ್ತಾನೆ. ಒಂದು ವೇಳೆ ಅದು ಬದಲಾವಣೆ ಆಗದಿದ್ದರೆ, ಕೂಡಲೇ ಅಂತಹ ಬದಲಾವಣೆಯನ್ನು ಸೆಟ್ಟಿಂಗ್ಸ್ ನಲ್ಲಿ ಗಮನಿಸಿ, ಅತಿಕ್ರಮಿತ ವ್ಯಕ್ತಿಯ ನಿಯಂತ್ರಣವನ್ನು ನಿಷ್ಕ್ರಿಯಗೊಳಿಸುವುದು.
ಇದು ಸಾಧ್ಯವಾಗದಿದ್ದರೆ, ನೀವು ನಿಯಂತ್ರಣ ಕಳೆದುಕೊಳ್ಳುವಿರಿ.
ಒಂದು ವೇಳೆ ನೀವು ನಿಯಂತ್ರಣ ಕಳೆದುಕೊಂಡರೆ ಫೇಸ್ಬುಕ್ ಸಪೋರ್ಟ್ ಅನ್ನು ಸಂಪರ್ಕಿಸಿ ಸೂಕ್ತ ದಾಖಲೆ/ಮಾಹಿತಿ ಒದಗಿಸಿ ಖಾತೆಯ ನಿಯಂತ್ರಣ ಮರಳಿ ಪಡೆಯುವ ಅವಕಾಶವನ್ನು ಫೇಸ್ಬುಕ್ ನೀಡಿದೆಯಾದರೂ, ಅದನ್ನು ಖಚಿತವಾಗಿ ಮರಳಿಸುವ ಭರವಸೆ ನೀಡುವುದಿಲ್ಲ.
ಅಂದರೆ ಅಂತಹ ಸಂದರ್ಭಗಳಲ್ಲಿ ಬಹುತೇಕ ಆಶೆಯನ್ನು ಬಿಡಬೇಕಾಗಿ ಬರಬಹುದು.
ಇದು ಆಗಬಾರದೆಂದರೆ, ಫೇಸ್ಬುಕ್ನಲ್ಲಿ ಲಭ್ಯವಿರುವ 2 Factor Authentication ಸೇರಿದಂತೆ, ಗರಿಷ್ಟ ಭದ್ರತಾ ಸೌಲಭ್ಯಗಳನ್ನು (Security Features) ಸೂಕ್ತವಾಗಿ ಬಳಸಿಕೊಳ್ಳುವುದರಿಂದ ಗರಿಷ್ಟ ಪ್ರಮಾಣದಲ್ಲಿ ಹ್ಯಾಕ್ ಆಗುವುದರಿಂದ ತಪ್ಪಿಸಿಕೊಳ್ಳಬಹುದು.
# ಫೇಕ್ (ನಕಲಿ) ಖಾತೆ
ಮೇಲೆ ತಿಳಿಸಿದಂತೆ ನಕಲಿ ಖಾತೆಯ #ಮೊದಲನೇ ವಿಧವನ್ನು, ನಿಮಗೆ ಫ್ರೆಂಡ್ ರಿಕ್ವೆಸ್ಟ್ ಬಂದ ಕೂಡಲೇ ಹಿಂದೆ ಮುಂದೆ ನೋಡದೆ ಫೊಟೋ ಮತ್ತು ಹೆಸರು ನೋಡಿ ಸ್ವೀಕಾರ (Accept) ಮಾಡುವ ಮೊದಲು ನಕಲಿ ಖಾತೆಯ ಪ್ರೊಫೈಲ್ ಕ್ಲಿಕ್ ಮಾಡಿ, ಅದರ ಬಳಿ ಇರುವ ಮೂರು ಚುಕ್ಕಿಗಳನ್ನು (…) ಕ್ಲಿಕ್ ಮಾಡಿ ಪ್ರೊಫೈಲ್ ರಿಪೋರ್ಟ್ ಮಾಡುವುದು.
ಫೇಸ್ಬುಕ್ ನೀವು ರಿಪೋರ್ಟ್ ಮಾಡಿದ 24 ಗಂಟೆಗಳ ಒಳಗಾಗಿ ಅಂತಹ ಸಂದೇಹಾತ್ಮಕ ಖಾತೆಗಳನ್ನು ವೈಯಕ್ತಿಕವಾಗಿ ಪರಿಶೀಲಿಸುತ್ತದೆ.
ಇಲ್ಲಿ ಪ್ರೊಫೈಲ್ ಬ್ಲಾಕ್ ಮಾಡದಿರಿ!
ನೀವು ರಿಪೋರ್ಟ್ ಮಾಡಿ 24 ಗಂಟೆಗಳ ನಂತರವೂ ಆ ಖಾತೆ ಚಾಲ್ತಿಯಲ್ಲಿದ್ದರೆ ಅದು ಫೇಕ್ ಖಾತೆ ಆಗಿರುವ ಸಾಧ್ಯತೆ ಕಡಿಮೆ. ಮತ್ತೂ ಸಂದೇಹ ಇದ್ದಲ್ಲಿ, ನಿಮ್ಮ ಮಿತ್ರರನ್ನು ಬದಲೀ ವ್ಯವಸ್ಥೆಯ ಮೂಲಕ ಸಂಪರ್ಕಿಸಿ ಖಚಿತಪಡಿಸಿಕೊಳ್ಳುವುದು.
ಮೂಲ ವ್ಯಕ್ತಿಯ ನಕಲಿ ಖಾತೆ ಆಗಿದ್ದಲ್ಲಿ, ಮತ್ತು ಅದು ನೀವು ರಿಪೋರ್ಟ್ ಮಾಡಿ 24 ಗಂಟೆಗಳ ಒಳಗೆ ಬ್ಲಾಕ್ ಆಗದಿದ್ದಲ್ಲಿ ಮೂಲ ವ್ಯಕ್ತಿಯು ಆ ಸಂಬಂಧ ಹತ್ತಿರದ ಸೈಬರ್ ಕ್ರೈಂ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ, ಅವರ ಹೆಸರನ್ನು ಬಳಸಿ ವಂಚನೆ ಪ್ರಕರಣ ನಡೆದಲ್ಲಿ, ತಿಳಿದ ನಂತರವೂ ಯಾವುದೇ ಕ್ರಮ ಕೈಗೊಳ್ಳದ ಅವರ ಸಹಮತವೂ ಇದೆಯೆಂದೇ ಭಾವಿಸಬಹುದಾದ ಸಾಧ್ಯತೆ ಇರುತ್ತದೆ.
ಫೇಸ್ಬುಕ್ನಲ್ಲಿ ಯಾರೇ ಆಗಲಿ ಯಾವುದೇ ರೀತಿಯ ತುರ್ತು ಹಣಕಾಸಿನ ನೆರವು ಕೇಳಿದರೆ, ಇಮೇಲ್ ಮೂಲಕ ಬ್ಯಾಂಕ್ ಖಾತೆಯ ಪಾಸ್ ಬುಕ್ ಫೊಟೋವನ್ನು ಕಳುಹಿಸಲು ಕೋರಿ. ಯಾವುದೇ ರೀತಿಯ ಕಾರಣ ನೀಡಿ ನಿರಾಕರಿಸಿದಲ್ಲಿ, 1 ಪೈಸೆಯನ್ನೂ ನೀಡದೇ “Sorry, I Can’t Send” ಹೇಳಿಬಿಡಿ. ಇಮೇಲ್ ನಿಮಗೆ ಒಂದು ದಾಖಲೆಯಾಗುತ್ತದೆ.
#ಎರಡನೇ ವಿಧದ ನಕಲಿ ಖಾತೆಗಳನ್ನು ಸ್ವಲ್ಪ ಗಮನಿಸಿ, ನಿಮ್ಮ ಅರಿವಿಗೆ ಅದು ಫೇಕ್ ಎಂದು ಬಂದಾಕ್ಷಣ, ಮೊದಲು ಅನ್ ಫ್ರೆಂಡ್ ಮಾಡಿ, ನಂತರ ಬ್ಲಾಕ್ ಮಾಡಿ ಬಿಡಿ. ಅನ್ ಫ್ರೆಂಡ್ ಮಾಡದೇ ಇದ್ದರೆ, ನಿಮ್ಮ ಇತರೇ ಮಿತ್ರರನ್ನು ಕೂಡ ವಂಚನೆಗೆ ಒಳಪಡಿಸಬಹುದು.
#ಮೂರನೇ ವಿಧದ ನಕಲಿ ಖಾತೆಗೆ ಸಂಬಂಧಿಸಿದಂತೆ ನೀವು ಏನೂ ಮಾಡಬೇಕೆಂದಿಲ್ಲ. ಕಾರಣ ಅಂತಹವುಗಳು ಯಾವುದೇ ಮೋಸ, ವಂಚನೆಯ ಉದ್ದೇಶ ಹೊಂದಿರುವ ಸಾಧ್ಯತೆ ಕಡಿಮೆ. ನಿಮಗೆ ಉಪದ್ರ ಎನಿಸಿದರೆ ಅನ್ ಫ್ರೆಂಡ್ ಆಗಿಬಿಡಿ.
This is an educational information related using of Facebook also known as FB securely. I have tried to educate on the Facebook Hacked Account and Fake Facebook Accounts and the remedies in regional language Kannada. I feel this will help you to understand better on the security features available in Facebook.
✍️ ಶರತ್ ಆಳ್ವ ಕರಿಂಕ
ಕ್ರಸ್ಟ್ | ಪುತ್ತೂರು